ಕಬ್ಬಿಣ (ವೈದ್ಯದಲ್ಲಿ) : ಗಿಡ ಮರಗಳಲ್ಲಿ ಇದ್ದೇ ತೀರುವ ಪತ್ರಹರಿತ್ತಿನಲ್ಲಿ (ಕ್ಲೋರೊಫಿಲ್) ಕಬ್ಬಿಣದ ಅಂಶ ಇಲ್ಲವಾದರೂ ಜೀವಕಣದ ಕಿರಿಯಂಗದಲ್ಲಿ (ಆರ್ಗನೆಲ್) ಅದರೊಂದಿಗಿದ್ದು ಅದರ ತಯಾರಿಕೆಗೆ ಇದು ಬೇಕು. ರಕ್ತದ ಕೆಂಪು ಕಣಗಳಲ್ಲಿರುವ ರಕ್ತಬಣ್ಣಕದ (ಹಿಮೊಗ್ಲಾಬಿನ್) ಮುಖ್ಯ ಜೀವಾಳದ ಭಾಗ ಕಬ್ಬಿಣಾಂಶ. ಆದ್ದರಿಂದ ಕೆಲವು ಬಗೆಗಳ ರಕ್ತಕೊರೆಗಳಲ್ಲಿ( ಅನೀಮಿಯಾಸ್) ವೈದ್ಯಚಿಕಿತ್ಸೆಯಲ್ಲಿ ಕಬ್ಬಿಣದ ಲವಣಗಳ ಬಳಕೆಯಾಗುತ್ತಿದೆ. ಬದ್ಧಕವಾಗೂ (ಅಸ್ಟ್ರಿಂಜೆಂಟ್). ರಕ್ತತಡೆಕವಾಗೂ ರಕ್ತಸುರಿತದ ನಿಲುಗಡೆಗಾಗಿ ಕಬ್ಬಿಣದ ಲವಣಗಳನ್ನು ಬಳಸುವುದೂ ಉಂಟು. ಉಸಿರಾಟದ ಬಣ್ಣ ವಸ್ತುವಾಗಿ ಇದು ಊತಕಗಳಿಗೆ ಆಮ್ಲಜನಕದ ಒದಗಣೆಗೆ ಮುಖ್ಯವಾಗಿ ನೆರವಾಗುವುದು. ಕಣಬಣ್ಣಕ (ಸೈಟೊಕ್ರೋಂ) ಮಂಡಲದ ತೆರನ ಕೆಲವು ಉಸಿರಾಟದ ದೊಳೆಗಳಲ್ಲೂ ಇದು ಇದ್ದೇ ತೀರಬೇಕು. ಮೇಲ್ಪೊರೆಗಳ ಪುಷ್ಟಿಗೂ ಇದು ಬೇಕೇಬೇಕು. ಸು. 2-6 ಗ್ರಾಂಗಳಷ್ಟು ಕಬ್ಬಿಣಾಂಶ ಮೈಯಲ್ಲಿರುತ್ತದೆ. ಇದರಲ್ಲಿ ಶೇ.65 ರಕ್ತಬಣ್ಣಕ ಸ್ನಾಯಬಣ್ಣಕದಲ್ಲೂ (ಮೈಯೊಗ್ಲೋಟಿಸ್) ಶೇ.15 ರಲ್ಲಿ, ಈಲಿ, ತೊರಳೆ, ಎಲುಮಜ್ಜೆಗಳಂಥ ನವಿರ್ಜಾಲೊಳ್ಪೊರೆಯ (ರೆಟಿಕ್ಯುಲೊ ಎಂಡೊತೀಲಿಯಲ್) ಊತಕಗಳಲ್ಲೂ ಶೇ.20 ಉಳಿದ ಊತಕಗಳಲ್ಲೂ ಹಂಚಿರುತ್ತದೆ. ಊತಕಗಳಲ್ಲಿ ಮುಖ್ಯವಾಗಿ ಫೆರಿಟಿನ್ನಾಗಿ ಪ್ರೋಟೀನೊಡಗೂಡಿ ದಾಸ್ತಾನಾಗಿರುವುದು. ಆಹಾರದಿಂದ ಕಬ್ಬಿಣ ಕರುಳಿನ ಮೂಲಕ ರಕ್ತಗೂಡುತ್ತದೆ. ಎಲುಮಜ್ಜೆಯಲ್ಲಿ ಕೆಂಪು ರಕ್ತಕಣಗಳ ತಯಾರಿಕೆಗೆ ಒದಗುವುದು. ಕೆಲವು ವಾರಗಳು ರಕ್ತದಲ್ಲಿ ಸುತ್ತಾಡಿದ ಮೇಲೆ ಕೆಂಪು ರಕ್ತಕಣಗಳು ಈಲಿಯಲ್ಲಿ ಒಡೆದು ಹಾಳಾಗುತ್ತವೆ. ಇವುಗಳಲ್ಲಿದ್ದ 20-25 ಮಿಲಿಗ್ರಾಂ ಕಬ್ಬಿಣಾಂಶ ಮಾತ್ರ ದಿನವೂ ಮತ್ತೆ ಬಳಕೆಗೆ ಬರುತ್ತದೆ. ಸಾಮಾನ್ಯವಾಗಿ ಹೆಂಗಸು ಒಂದು ಬಾರಿ ಮುಟ್ಟಾದಾಗ ಕೇವಲ ಸು. 10-12 ಮಿಲಿಗ್ರಾಂನಷ್ಟು ಕಬ್ಬಿಣಾಂಶವನ್ನು ಕಳೆದುಕೊಳ್ಳುತ್ತಾಳೆ.
ಆಹಾರದಲ್ಲಿನ ಕಬ್ಬಿಣ ಮೈಗೂಡಲು ತಾಮ್ರ, ಮ್ಯಾಂಗನೀಸ್, ಕೊಬಾಲ್ಟ್‌ ಅಂಶಗಳೂ ಕೊಂಚ ಇರಬೇಕು. ಮೈಗೂಡಿದ ಕಬ್ಬಿಣ ಅಲ್ಲಿಯೇ ಇದ್ದು ಮೇಲಿಂದ ಮೇಲೆ ಬಳಕೆಗೆ ಒದಗುತ್ತಿರುವುದು.  ಗರ್ಭದಲ್ಲಿ ಬೆಳೆವ ಪಿಂಡಗೂಸಿಗೆ ಕಬ್ಬಿಣದ ಕೊರತೆ ಹೆಚ್ಚು. ಅದಕ್ಕೆ ಬೇಕಿರುವ ಕಬ್ಬಿಣದ ಅಂಶವೆಲ್ಲ ತಾಯಿಯಿಂದಲೇ ಬರಬೇಕು. ಆರು ತಿಂಗಳ ಕೂಸು ಬಸುರಿಯ ಇಡೀ ಕಬ್ಬಿಣಾಂಶವನ್ನು ಎತ್ತಿಕೊಳ್ಳಬಲ್ಲುದು. ಇದರಿಂದಲೇ ಬಸುರಿ ದಿನವೂ ಸಾಕಷ್ಟು ಕಬ್ಬಿಣಾಂಶವನ್ನು ಆಹಾರದಲ್ಲಿ ಸೇವಿಸದಿದ್ದಲ್ಲಿ ವಿಪರೀತ ರಕ್ತಕೊರೆ ಅನುಭವಿಸುವಳು. ಸಾಮಾನ್ಯರಿಗೆ ದಿನವೂ ಆಹಾರದ ಮೂಲಕ 1-2 ಮಿಲಿಗ್ರಾಂನಷ್ಟು ಕಬ್ಬಿಣಾಂಶ ಮೈಗೂಡುತ್ತಿರಲೇಬೇಕು. ಇದು ದಿನದ ಎಂದಿನ ತಿಂಡಿ, ತಿನಿಸು, ಊಟಗಳಲ್ಲಿ 15 ಮಿಲಿಗ್ರಾಂ ನಷ್ಟಾದರೂ ದೊರಕುತ್ತದೆ. ರಕ್ತಕೊರೆಯಾಗಿದ್ದರೆ 25-30 ಮಿಲಿಗ್ರಾಂಗಳಾದರೂ ದಿನವೂ ಸಲ್ಲಬೇಕು. ಕೊಕ್ಕೆಹುಳುಬೇನೆಯಲ್ಲಿ ಕರುಳಲ್ಲಿ ಸೇರಿಬಿಟ್ಟ ಕೊಕ್ಕೆಹುಳುಗಳು ರಕ್ತಹೀರಿ ಹಾಕುತ್ತಿರುವಾಗಂತೂ ರಕ್ತದಲ್ಲಿ ಕಬ್ಬಿಣದ ಕೊರೆ ಅಪಾರ.

ಕಬ್ಬಿಣಾಂಶವನ್ನು, ಹಲವಾರು ಲವಣರೂಪಗಳಲ್ಲಿ ಮದ್ದಾಗಿ ಬಳಸುವುದುಂಟು. ಫೆರಸ್ ಲವಣವೇ ಬಲು ಒಳ್ಳೆಯದು. ಚೆನ್ನಾಗಿ ಮೈಗೂಡುತ್ತದೆ. ಅಗ್ಗ, ತುರ್ತಿನ ಹೊತ್ತಿನಲ್ಲಿ ಬೇಗನೆ ಕಬ್ಬಿಣ ಒದಗಿಸಲು ರೋಗಿಗೆ ಚುಚ್ಚಿಹೊಗಿಸುವ ಸಮ್ಮಿಶ್ರ ರೂಪಗಳು ಇವೆ.

ಕಬ್ಬಿಣಾಂಶ ಮೈಗೂಡುವಾಗ ಏನೋ ತೊಂದರೆಯಾಗಿ ಕಬ್ಬಿಣವಿರುವ ಬಣ್ಣವಸ್ತುವಾದ ರಕ್ತಗಬ್ಬಿಣಕ (ಹೀಮೋಸೈಡೆರಿನ್) ಊತಕಗಳಲ್ಲಿ ಉಳಿದುಬಿಟ್ಟು ರಕ್ತಗಬ್ಬಿಣತೆ (ಹೀಮೊಸೈಡೆರೋಸಿಸ್) ರೋಗವೇಳುತ್ತದೆ. ಕೆಂಪು ರಕ್ತಕಣಗಳು ಒಡೆದು ವಿಪರೀತ ಹಾಳಾದಾಗ ಹೀಗಾಗುವುದು ಸಾಮಾನ್ಯ.

ಬಾದಾಮಿ, ಸೀಮೆ ಆಷಾಢಿ (ಆಸ್ಪರ್ಯಾಗಸ್), ತವುಡು, ಹುರುಳೀಕಾಯಿ, ಕೋಸುಹೂ, ಸೆಲರಿ ಸೊಪ್ಪು, ತತ್ತಿಬಂಡಾರ, ಮೂತ್ರಪಿಂಡ, ಈಲಿ, ಲೆಟೀಸ್ ಸೊಪ್ಪು, ತೋಕೆ ಗೋಡಿ ಹಿಟ್ಟು, ಮೋಳಿ, ಸೋಯಅವರೆ, ಗೋದಿ ಹಿಟ್ಟು, ಹಸಿರುಸೊಪ್ಪುಗಳು, ದಂಟು, ನುಗ್ಗೆಕಾಯಿ, ಬೀಟ್ಗೆಡ್ಡೆ, ಕೋಸುಗೆಡ್ಡೆ, ಕಾಕಂಬಿ, ಕಿತ್ತಳೆ, ಮೆಣಸು, ಬಟಾಣಿ, ಉರುಳುಗೆಡ್ಡೆ, ಮೂಲಂಗಿ, ಅನಾನಸು, ಕಲ್ಲಂಗಡಿ, ತಕ್ಕಾಳಿ, ನಾಯಿಕೊಡೆಗಳಲ್ಲಿ ಕಬ್ಬಿಣಾಂಶವಿದೆ. ಗಜ್ಜರಿಯಲ್ಲೂ ಹಾಲಿನಲ್ಲೂ ಕಬ್ಬಿಣಾಂಶ ಕಡಿಮೆ, ಕೆಲವೇಳೆ ಆಹಾರದಲ್ಲಿರುವ ಕಬ್ಬಿಣಾಂಶವೆಲ್ಲ ಮೈಗೂಡದು. ಮೈಗೆ ಬೇಕಿಲ್ಲದಾಗ ಸೇವಿಸಿದ ಕಬ್ಬಿಣಾಂಶ ಹಾಗೇ ಹೊರಬೀಳುತ್ತದೆ. 

ಕಬ್ಬಿಣ ಲವಣಗಳಿರುವ ಮಾತ್ರೆಗಳಿಗೆ ಸಕ್ಕರೆ ಸವರಿದ್ದರಂತೂ ಮಕ್ಕಳು ಪೆಪ್ಪರ್ಮಿಂಟೆಂದು ತಿನ್ನುವ ಅವಕಾಶವಿದೆ. ಚಿಕ್ಕಮಕ್ಕಳಿಗೆ ಅಂಥ ಮಾತ್ರೆಗಳು ವಿಷಕರವಾದ್ದರಿಂದ ಅವರಿಗೆ ಸಿಗದಂತೆ ಎತ್ತಿರಿಸಿರಬೇಕು.              	(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ